ಧ್ರುವ ಹೆಲಿಕಾಪ್ಟರ್

ಧ್ರುವ ಇತ್ತೀಚೆಗೆ ವಿನ್ಯಾಸಗೊಳಿಸಲಾಗಿರುವ ದೇಶೀಯ ಹೆಲಿಕಾಪ್ಟರ್. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಾರ್ಖಾನೆ ವಿನ್ಯಾಸ ಮಾಡಿರುವ ಇದು ಭಾರತದ ಮೊಟ್ಟಮೊದಲ ಮಿಲಿಟರಿ ಮತ್ತು ಸಿವಿಲ್ ಹೆಲಿಕಾಪ್ಟರ್.

ಹೆಲಿಕಾಪ್ಟರ್‍ನ ಇತಿಹಾಸ

ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿಯೇ ಚೀನಾದಲ್ಲಿ `ಹಾರುವ ಬುಗರಿಗಳಿದ್ದವು. ಈ ಸಣ್ಣ ಆಟಿಕೆಯಲ್ಲಿ, ದುಂಡನೆಯ ಕಡ್ಡಿಯ ಮೇಲ್ತುದಿಗೆ ಪುಕ್ಕಗಳಿದ್ದು, ಮಕ್ಕಳು ಕಡ್ಡಿಯನ್ನು ದಾರದಿಂದ, ಅಥವಾ ಬರೀ ಕೈಯಲ್ಲೇ ಕಡೆದು ಬಿಟ್ಟರೆ, ಬುಗರಿ ನೇರವಾಗಿ ಮೇಲೆ ಚಿಮ್ಮುತ್ತಿತ್ತು. ಮೊತ್ತ ಮೊದಲ ಹಾರುವ ಯಂತ್ರದ ಕಲ್ಪನೆ ಇದರಿಂದ ದೊರಕಿತು. ಕ್ಷಿತಿಜೀಯ ಅಲಗುಗಳುಳ್ಳ ಗಾಳಿಯಂತ್ರದಂತೆ ಕಾಣುವ ಚಿತ್ರವೊಂದು 1325ರ ದಿನಾಂಕವನ್ನು ಹೊತ್ತಿದೆ. 1460ರ ಮಗುವನ್ನೆತ್ತಿಕೊಂಡ ಮಡೋನ್ನಾಳ ಚಿತ್ರದಲ್ಲಿ ಮಗು ಕ್ರಿಸ್ತನ ಕೈಯಲ್ಲಿ ಆಟಿಗೆಯ ಹೆಲಿಕಾಪ್ಟರ್ ಇದೆ. ಅಂದರೆ ಐನೂರು ವರ್ಷಗಳ ಹಿಂದೆಯೇ ಹೆಲಿಕಾಪ್ಟರ್‍ನಂಥ ಬೊಂಬೆಗಳನ್ನು ಬಹಳಷ್ಟು ಸಂಖ್ಯೆಯಲ್ಲಿ ತಯಾರಿಸುತ್ತಿದ್ದರು. ಲಿಯೊನಾರ್ಡೊ ದ ವಿಂಚಿ ಚಿತ್ರಗಳಲ್ಲಿ, `ಮೇಲೆತ್ತುವ ಗಾಳಿಯ ತಿರುಪಿನಂತಹ ಹೆಲಿಕಾಪ್ಟರ್‍ನ ವಿನ್ಯಾಸಗಳನ್ನು ಕಾಣಬಹುದಾಗಿದೆ. ಇದರ ಬಗ್ಗೆ ನಿಗೂಢ, ಗುಪ್ತ ಭಾಷೆಯಲ್ಲಿ ವಿವರಗಳೂ ಇವೆ. ಆದರೆ ಈ ಮಾದರಿಯನ್ನು ನಿಜಕ್ಕೂ ತಯಾರಿಸಿ ಹಾರಿಸಿದ್ದಾನೆಯೆ ಎಂಬುದು ಮಾತ್ರ ತಿಳಿದಿಲ್ಲ. ಗಾಳಿ ತಿರುಪಿನ ಮೂಲಕ ಮನುಷ್ಯ ಹಾರುವುದನ್ನು ಕಲ್ಪಿಸಿದ ಕೀರ್ತಿ ದ ವಿಂಚಿಗೆ ಸೇರುತ್ತದೆ.

ಧ್ರುವ ಹೆಲಿಕಾಪ್ಟರ್

ಅತ್ಯಾಧುನಿಕ ಮತ್ತು ಹಗುರವಾದ ಈ ಹೆಲಿಕಾಪ್ಟರ್ ಬೆಂಗಳೂರಿನಲ್ಲಿ ನಡೆದ ಏರ್ ಶೋ 2005'ರಲ್ಲಿ ತನ್ನ ಸಾಮಥ್ರ್ಯವನ್ನು ತೋರಿಸಿತು. ಇದಕ್ಕೆ ಹಿಂದೆ, ಜೂನ್ 2003ರ ಪ್ಯಾರಿಸ್ ಏರ್ ಶೋನಲ್ಲಿ ಎರಡು ಧ್ರುವ ಹೆಲಿಕಾಪ್ಟರ್‍ಗಳು ಹಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಹುಟ್ಟಿಸಿದ್ದವು. ಫೆಬ್ರವರಿ 2004ರಲ್ಲಿ ಸಿಂಗಾಪುರದ 'ಏರ್ ಶೋನಲ್ಲಿ ಭಾರತದ ವಾಯುಪಡೆ ಐದು ಧ್ರುವ ಹೆಲಿಕಾಪ್ಟರ್‍ಗಳನ್ನು ಕೊಂಡೊಯ್ದು, ಪ್ರದರ್ಶನ ನೀಡಿ ಗಮನ ಸೆಳೆಯಿತು. ಅದೇ ವರ್ಷದ ಜೂನ್‍ನಲ್ಲಿ ನಾಲ್ಕು ಧ್ರುವ ಹೆಲಿಕಾಪ್ಟರ್‍ಗಳು ದಕ್ಷಿಣ ಅಮೆರಿಕಾದ ಚಿಲಿ ದೇಶಕ್ಕೆ ಹೋಗಿ, ಚಿಲಿಯ ಹಿಮವತ್ಪರ್ವತಗಳಲ್ಲಿ, ಮರುಭೂಮಿಗಳಲ್ಲಿ, ಕಡಲ ತೀರದುದ್ದಕ್ಕೂ ಹಾರಿ ಬಂದವು. ಧ್ರುವ ಹೆಲಿಕಾಪ್ಟರ್ ಜಗತ್ತಿನ ವಾಯುಯಾನದ ನಕಾಶೆಯಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನ ಗಳಿಸಿಕೊಟ್ಟಿದೆ.

ಹೆಲಿಕಾಪ್ಟರ್ ಮಾನವ ನಿರ್ಮಿತ ಅತ್ಯಂತ ಸಂಕೀರ್ಣ ಯಂತ್ರಗಳಲ್ಲೊಂದು. ಇದು ವಿಶಿಷ್ಟ ಯಂತ್ರವಾಗಿದೆ. ತಿರುಗುವ ರೆಕ್ಕೆಗಳನ್ನು ಹೊಂದಿದ್ದು, ನೇರ ಮೇಲೇರುವ ಈ ಅದ್ಭುತ ಯಂತ್ರ ತುರ್ತು ಸಮಯದಲ್ಲಿ ಮನೆಯ ಮಾಡಿನ ಮೇಲೆ, ಹಸಿರು ಹಾಸಿನ ಮೇಲೆ ಎಲ್ಲೆಂದರಲ್ಲಿ ಇಳಿಯಬಲ್ಲದು. ಕೊಚ್ಚಿಹಾಕುವ ಪ್ರವಾಹ, ಉರಿವ ಕಟ್ಟಡಗಳಿಂದ, ಮಡಿವ ಯುದ್ಧ ಭೂಮಿಗಳಲ್ಲಿ ನುಸುಳಿ ಬಂದು ಕಾಪಾಡಬಲ್ಲದು. ಉದಾಹರಣೆಗೆ, 1944ರಲ್ಲಿ ನಡೆದ ಎರಡನೇ ಮಹಾಯುದ್ಧದ ಸಮಯದಲ್ಲಿ ಹೆಲಿಕಾಪ್ಟರ್‍ಗಳು ಜೀವ ರಕ್ಷಕನಂತೆ ಕೆಲಸ ಮಾಡಿದ್ದನ್ನು ಸ್ಮರಿಸಬಹುದು. 

ಸಾಮಾನ್ಯವಾಗಿ ವಿಮಾನಗಳಿಗೆ ಬೇಕಾದ 'ಓಡುಹಾದಿಗಳನ್ನು ಅತ್ಯಂತ ಜಾಗರೂಕತೆಯಿಂದ ಕಾಪಾಡಬೇಕು. ವಿಮಾನಗಳು ಇವುಗಳ ಮೇಲೆ ಓಡಿ, ಆಕಾಶಕ್ಕೆ ಜಿಗಿಯುತ್ತವೆ. ಆದರೆ ಹೆಲಿಕಾಪ್ಟರ್‍ಗಳು ಹಾಗಲ್ಲ. ನಿಂತಲ್ಲಿಂದಲೇ ನೇರವಾಗಿ ಮೇಲಕ್ಕೆ ಜಿಗಿಯಬಲ್ಲವು; ಇಳಿಯಬಲ್ಲವು. 'ಓಡುಹಾದಿಯಲ್ಲಿ ಸ್ವಲ್ಪ ದೂರ ಓಡುವ ಅಗತ್ಯ ಹೆಲಿಕಾಪ್ಟರ್‍ಗೆ ಇಲ್ಲ. ಇವು ಯಾವ ದಿಕ್ಕಿಗೆ ಬೇಕಾದರೂ ತಟ್ಟನೆ ತಿರುಗಬಲ್ಲವು. ಆದ್ದರಿಂದ ಹೆಲಿಕಾಪ್ಟರ್‍ಗಳಿಗೆ ಸುವ್ಯವಸ್ಥಿತ ವಿಮಾನ ನಿಲ್ದಾಣಗಳು ಬೇಕಿಲ್ಲ. ತೆರೆದ ಒಂದಿಷ್ಟು ಜಾಗವಾದರೆ ಸಾಕು. ಕಟ್ಟಡಗಳ ತಾರಸಿ, ತೈಲ ಕೇಂದ್ರಗಳ ಮೇಲೆ, ಹಡಗಿನ ಅಟ್ಟ, ಗೊಂಡಾರಣ್ಯದ ನಟ್ಟನಡುವಿನ ಜಾಗ ಹೀಗೆ ಎಲ್ಲಾದರೂ ಇವು ಲೀಲಾಜಾಲವಾಗಿ ಇಳಿಯಬಲ್ಲವು. ಬೆಂಕಿ, ಪ್ರವಾಹ, ಅಪಘಾತ, ಯುದ್ಧದಂತಹ ತುರ್ತು ಸಮಯದಲ್ಲಿ ದುರ್ಗಮ ಸ್ಥಳಗಳಿಗೆ ಹೆಲಿಕಾಪ್ಟರ್‍ಗಳು ಧಾವಿಸಿ, ಗಾಯಗೊಂಡವರನ್ನು ಸುರಕ್ಷತಾ ಸ್ಥಳಗಳಿಗೆ ಸಾಗಿಸಬಲ್ಲವು. ಚಂದ್ರನಲ್ಲಿ ಹೆಜ್ಜೆ ಊರಿ ಭೂಮಿಗೆ ಹಿಂದಿರುಗಿದ ಆಕಾಶನೌಕೆ ಸಮುದ್ರದಲ್ಲಿ ಬಂದಿಳಿದಾಗ, ಅಂತರಿಕ್ಷಾ ಯಾನಿಗಳನ್ನು ಎತ್ತಿ ಸುರಕ್ಷತಾ ಪ್ರದೇಶಗಳಿಗೆ ಸಾಗಿಸಿದ್ದು, ಇಂಥ ಹೆಲಿಕಾಪ್ಟರ್‍ಗಳಲ್ಲೊಂದು. 

ಫೆಬ್ರವರಿ 2001ರಲ್ಲಿ ನಡೆದ ಅಂತಾರಾಷ್ಟ್ರೀಯ ವಾಯು ಪ್ರದರ್ಶನ ಏರ್ ಇಂಡಿಯಾ 2001ರಲ್ಲಿಯೇ ಧ್ರುವ ಹೆಲಿಕಾಪ್ಟರ್ ಏರ್ ಆಂಬುಲೆನ್ಸ್ ಪಾತ್ರದಲ್ಲಿ ಹಾರಿ, ತನ್ನ ಜೀವರಕ್ಷಕ ಸಾಮಥ್ರ್ಯವನ್ನು ಮೆರೆದಿತ್ತು. ರಸ್ತೆಯ ಅಪಘಾತ, ಮನೆಯಲ್ಲಿ ಎದುರಾಗುವ ಆಕಸ್ಮಿಕ ಹೃದಯಾಘಾತದಂತಹ ತುರ್ತು ಸಮಯದಲ್ಲಿ ರೋಗಿಗೆ ಆದಷ್ಟು ವೇಗವಾಗಿ ಪ್ರಥಮ ಚಿಕಿತ್ಸೆಯನ್ನು ಪಡೆಯುವಂತೆ ಮಾಡುವಲ್ಲಿ ಏರ್ ಆಂಬುಲೆನ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ಧ್ರುವ ಹೆಲಿಕಾಪ್ಟರ್‍ನ ವೈಶಿಷ್ಟ್ಯವೆಂದರೆ, ಇದು ಮಿಲಿಟರಿ ಮತ್ತು ಸಿವಿಲ್ ಎರಡೂ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲದು. ಅಂದರೆ, ಮುಖ್ಯವಾಗಿ ಭೂಸೇನೆ, ವಾಯುಸೇನೆ, ನೌಕಾಪಡೆ, ತಟರಕ್ಷಕಗಳಿಗೆ ವಿನ್ಯಾಸಗೊಂಡರೂ, ಈ ಮಿಲಿಟರಿ ಹೆಲಿಕಾಪ್ಟರ್ ಸಿವಿಲ್ ಕ್ಷೇತ್ರದಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಾರಣವೆಂದರೆ- ಯುದ್ಧದ ಹೆಲಿಕಾಪ್ಟರ್‍ಗಳಿಗೆ ತಟ್ಟನೆ ತಿರುಗಬಲ್ಲ, ಮೇಲೇರಬಲ್ಲ, ಶತ್ರುಗಳ ಕಿವಿಗೆ ಕೇಳದಂತೆ ಆದಷ್ಟು ಕಡಿಮೆ ಸದ್ದು ಮಾಡುವ, ದುರ್ಗಮ ಪ್ರದೇಶಗಳಲ್ಲೂ, ಇಕ್ಕಟ್ಟಿನ ತಾಣಗಳಲ್ಲೂ, ಹದಗೆಟ್ಟ ಹವಾಮಾನದಲ್ಲಿಯೂ ಹಾರುವಂತಹ ಸಾಮಥ್ರ್ಯ ಹೊಂದಿರುವುದು ಎರಡೂ ಕ್ಷೇತ್ರಗಳಿಗೆ ಅವಶ್ಯಕ.

ಧ್ರುವದ ವಿನ್ಯಾಸ

ಧ್ರುವ ಹೆಲಿಕಾಪ್ಟರ್‍ನ ವಿಶೇಷವೆಂದರೆ, ಇದು ಬಹುಪಾತ್ರಧಾರಿ. ಸಾಮಾನ್ಯವಾಗಿ ಹೆಲಿಕಾಪ್ಟರನ್ನು ಒಂದು ನಿರ್ದಿಷ್ಟ ಕಾರ್ಯಕ್ಕೆ ವಿನ್ಯಾಸ ಮಾಡುವುದುಂಟು. ಉದಾಹರಣೆಗೆ, ಭೂಸೇನೆಗೆ ಎತ್ತರದ, ಕೊರೆವ ಹಿಮದಲ್ಲಿ ಹಾರುವ ಹೆಲಿಕಾಪ್ಟರ್‍ನ ಅವಶ್ಯಕತೆಯಿದ್ದರೆ, ನೌಕಾಪಡೆಗೆ ಸಮುದ್ರ ಮಟ್ಟದಲ್ಲಿ, ಕಡಲಿನ ಉಪ್ಪು ಮಿಶ್ರಿತ ಹವೆಯಲ್ಲಿ ಹಾರುವ ಹೆಲಿಕಾಪ್ಟರ್ ಬೇಕಾಗುತ್ತದೆ. ಆದರೆ ಧ್ರುವ ಹೆಲಿಕಾಪ್ಟರ್ ಎಲ್ಲ ಸೇನೆಗಳ ಅವಶ್ಯಕತೆಗೆ ಹಾಗೂ ನಾಗರಿಕರ ಸಹಾಯಕ್ಕೆ ಒದಗಿ ಬರುವಂತೆ ವಿನ್ಯಾಸಗೊಂಡಿದ್ದು, ಮಲ್ಟಿ ರೋಲ್, ಮಲ್ಟಿ ವಿಷನ್ ಹೆಸರುಗಳಿಂದ ಪ್ರಸಿದ್ಧಿಯಾಗಿದೆ.

ಧ್ರುವ ಹೆಲಿಕಾಪ್ಟರನ್ನು ಗಟ್ಟಿಯಾದ, ಹಗುರಾದ ಕಾಂಪೊಸಿಟ್ ವಸ್ತುಗಳಿಂದ ತಯಾರಿಸಲಾಗಿದೆ. ಇದರ ನೆತ್ತಿಯ ಮೇಲಿನ ಪರಿಭ್ರಾಮಕ ಅಲಗುಗಳಿಗೆ, ಲೋಹ ಕವಚವನ್ನು ತೂರಿ ಹೋಗಬಲ್ಲ ಆರ್ಮರ್ ಪಿಯರ್ಸಿಂಗ್ ಬುಲೆಟ್ ಬಂದು ಬಡಿದರೂ ಅಥವಾ ಸಿಡಿಲು ಬಡಿದರೂ ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಯಬಲ್ಲದು. ತಲೆಯ ಮೇಲೆ, ತಿರುಗುವ ಅಲಗುಗಳು ಇರುವುದರಿಂದ ಹೆಲಿಕಾಪ್ಟರ್‍ನಲ್ಲಿ ತೂಗಾಟ, ಓಲಾಟ ಬಹಳ ಹೆಚ್ಚು ತಿರುಗುವ ಅಲಗುಗಳ ಕಂಪನಗಳು ಹೆಲಿಕಾಪ್ಟರ್‍ನ ದೇಹ ಭಾಗಕ್ಕೆ ಸಾಗಿ ಬರದಂತೆ ತಡೆಯಲು ಧ್ರುವದಲ್ಲಿ `ಆರಿಸ್ (ARIS-Anti Resonation Isolation System) ಎಂಬ `ಪ್ರತಿ ಕಂಪನ ವಿರೋಧಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 

	ಫ್ರೆಂಚ್ ವಿನ್ಯಾಸದ ಚೀತಾ, ಚೇತಕ್ ಹೆಲಿಕಾಪ್ಟರ್‍ಗಳಲ್ಲಿ ತಿರುಗುವ ಅಲಗುಗಳಿಂದ ಕೆಳಗಿಳಿದ ನಿಯಂತ್ರಣ ದಂಡಗಳು ಹೊರಗೆ ಕಾಣುವಂತಿವೆ. ಇದರಿಂದಾಗಿ ಯುದ್ಧರಂಗದಲ್ಲಿ ಬಂದು ಬಡಿಯುವ ಬುಲೆಟ್ ತೆರೆದು ನಿಂತ ನಿಯಂತ್ರಣ ದಂಡಗಳಿಗೆ ಹಾನಿಮಾಡಬಲ್ಲದು. ಆದರೆ ಧ್ರುವ ಹೆಲಿಕಾಪ್ಟರ್‍ನಲ್ಲಿ ಸಂಘಟಿತ ಗತಿಶೀಲ ವ್ಯವಸ್ಥೆ(Integrated Dynamic System  ) ವಿನ್ಯಾಸ ಅಳವಡಿಸಲಾಗಿದ್ದು, ನಿಯಂತ್ರಣ ದಂಡಗಳು ಸುರಕ್ಷಿತ ಕವಚದ ಒಳಗಿವೆ. ಇದರಿಂದಾಗಿ ತುರ್ತು ಸಮಯದಲ್ಲಿ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿ ಬಿದ್ದರೂ ಚಾಲಕ ಪೀಠಗಳಿಗೆ ಹಾನಿಯಾಗುವುದಿಲ್ಲ. 

	ಧ್ರುವ ಹೆಲಿಕಾಪ್ಟರ್‍ನ ಅಲಗುಗಳ ಮೇಲೆ ಅನೇಕ ಪ್ರಯೋಗಗಳನ್ನು ಚಂಡಿಘರ್‍ನ ಬಲಿಸ್ಟಿಕ್ ರಿಸರ್ಚ್ ಪ್ರಯೋಗ ಶಾಲೆಯಲ್ಲಿ ಮಾಡಲಾಗಿದೆ ಮತ್ತು ಬೆಂಗಳೂರಿನ ಸೆಂಟರ್ ಫಾರ್ ಏರ್‍ಬೋರ್ನ್ ಸಿಸ್ಟಮ್ಸ್ ಪ್ರಯೋಗಶಾಲೆಯಲ್ಲೂ ಇಡೀ ಹೆಲಿಕಾಪ್ಟರನ್ನು ಸಿಡಿಲಿನ ಅತ್ಯಧಿಕ ವಿದ್ಯುತ್ಪ್ರವಾಹದ ಪ್ರಯೋಗಕ್ಕೆ ಒಳಪಡಿಸಲಾಗಿದೆ.

	ಇವುಗಳಲ್ಲದೆ, ಸಮರ್ಥ ಹಾರಾಟಕ್ಕೆ ಸಹಕಾರಿಯಾಗುವಂತೆ ಧ್ರುವದಲ್ಲಿ ಡಿಜಿಟಲ್ ನಿಯಂತ್ರಣವನ್ನು ಹೊಂದಿರುವ ಅತ್ಯಾಧುನಿಕ ಎರಡು ಎಂಜಿನ್‍ಗಳಿವೆ. ಬೇರಿಂಗ್ ಇಲ್ಲದ ಬಾಲದ ಪರಿಭ್ರಾಮಕ ವ್ಯವಸ್ಥೆ(Tail   rotor) ಮತ್ತು ಕೀಲು ಅಥವಾ ತಿರುಗಣೆ ಇಲ್ಲದ ನೆತ್ತಿಯ ಮೇಲಿನ ಪರಿಭ್ರಾಮಕ ವ್ಯವಸ್ಥೆ(Main rotor). ಜೊತೆಗೆ  ಗಿಡಮರಗಳ ಹಿಂದೆ ಅಡಗಿ ನೆಲಕ್ಕೆ ಹತ್ತಿರವಾಗಿ ಹಾರಬಲ್ಲ ನ್ಯಾಪ್ ಆಫ್ ದಿ ಅರ್ತ್ ಸಾಮಥ್ರ್ಯವನ್ನು ಧ್ರುವ ಹೊಂದಿದೆ. ಸಾಮಾನ್ಯವಾಗಿ ಎಲ್ಲ ಹೆಲಿಕಾಪ್ಟರ್‍ಗಳಲ್ಲಿ ಗಣಕಗಳನ್ನು ಅಳವಡಿಸಿದ ಸ್ವಯಂ ಹಾರಾಟ ನಿಯಂತ್ರಕ ವ್ಯವಸ್ಥೆಯು ಲಭ್ಯವಿರುತ್ತದೆ. ಧ್ರುವದಲ್ಲಿ ಕೂಡ ಇಂತಹ ಆಟೋಪೈಲೆಟ್ ಅಳವಡಿಕೆಯಾಗಿದೆ. 

	ಸಾಧಾರಣವಾಗಿ ಯಾವುದೇ ವಿಮಾನ ಅಥವಾ ಹೆಲಿಕಾಪ್ಟರ್‍ನ ಕಾಕ್‍ಪಿಟ್‍ಗಳ ಮೂಲಕ ವಿಮಾನ ಹಾರುತ್ತಿರುವ ಎತ್ತರ, ವೇಗ, ದಿಕ್ಕು, ವಿಮಾನ ವಾಲಿರುವ ಕೋನ, ವಿಮಾನದಲ್ಲಿ ಉಳಿದಿರುವ ಇಂಧನ, ವಿಮಾನದ ಎಂಜಿನ್ ಮುಂತಾದ ಮುಖ್ಯ ವ್ಯವಸ್ಥೆಗಳನ್ನು ಕುರಿತ ವಿವರಗಳು ದೊರಕುತ್ತವೆ. ಆಧುನಿಕ ಕಾಕ್‍ಪಿಟ್‍ಗಳು ಸಂಪೂರ್ಣ ಎಲೆಕ್ಟ್ರಾನಿಕ್ ಕಾಕ್‍ಪಿಟ್‍ಗಳಾಗಿದ್ದು, ಕೇವಲ ನಾಲ್ಕೈದು ಫಲಕಗಳನ್ನು ಹೊಂದಿರುತ್ತವೆ. ಈ ಫಲಕಕ್ಕೆ `ಮಲ್ಟಿಫಂಕ್ಷನ್ ಡಿಸ್‍ಪ್ಲೇ ಎಂದು ಹೆಸರು. ಇವುಗಳ ಮೇಲೆ ಮೂಡುವ ಮಾಹಿತಿಗಳನ್ನು ಗಣಕಗಳು ನಿಯಂತ್ರಿಸುತ್ತವೆ. ಚಾಲಕ ತನಗೆ ಬೇಕಾದ ಮಾಹಿತಿಯನ್ನು ತೆಗೆದುಕೊಳ್ಳುತ್ತಾ ವಿಮಾನವನ್ನು ಹಾರಿಸಬಲ್ಲ. ಇಂತಹ ಕಾಕ್‍ಪಿಟ್‍ಗಳಿಗೆ ಗ್ಲಾಸ್ ಕಾಕ್‍ಪಿಟ್ ಎಂದು ಹೆಸರು. ಧ್ರುವ ಹೆಲಿಕಾಪ್ಟರ್‍ನ ಕಾಕ್‍ಪಿಟ್ ಬಹಳ ಅತ್ಯಾಧುನಿಕವಾದದ್ದು.

	ಧ್ರುವದ ಬಗೆಗಿನ ಮತ್ತೊಂದು ಸಂಗತಿಯೆಂದರೆ- ನೀರಿನ ಮೇಲೇನಾದರೂ ಹೆಲಿಕಾಪ್ಟರ್ ಕ್ರಾಶ್ ಆಗಿ ಬಿದ್ದರೆ, ತುರ್ತು ಸಮಯಕ್ಕೆಂದೇ ಹೊರಹೊಮ್ಮುವ ಬಲೂನಿನಂತಹ ನಾಲ್ಕು ಫ್ಲೊಟೇಶನ್ ಗೇರ್‍ಗಳು ಹೆಲಿಕಾಪ್ಟರ್ ಸುರಕ್ಷಿತವಾಗಿ ನೀರಿನ ಮೇಲೆ ಕೆಲ ಸಮಯದವರೆಗೂ ತೇಲುವಂತೆ ಮಾಡುತ್ತವೆ. ಇಷ್ಟು ಸಮಯದಲ್ಲಿ ಚಾಲಕರು, ಸೈನಿಕರು ಅಥವಾ ಪ್ರಯಾಣಿಕರು ಹೊರಬೀಳಬಲ್ಲರು.

ಯುದ್ಧರಂಗದಲ್ಲಿ ಧ್ರುವದ ಬಳಕೆ

	ಹೆಲಿಕಾಪ್ಟರ್‍ನ ಯುದ್ಧಕಾಲದ ಉಪಯೋಗಗಳು ಅತ್ಯಧಿಕ. ತಟ್ಟನೆ ಶತ್ರುಗಳ ಮೇಲೆ ಜಿಗಿಯಬಲ್ಲ, ನೆಲಕ್ಕೆ ಅತಿ ಸಮೀಪದಲ್ಲಿ ಗಿಡಮರಗಳ ಮರೆಯಲ್ಲಿ ಹಾರಿ, ಯಾವ ಮುನ್ಸೂಚನೆ ಇಲ್ಲದೆ ಶತ್ರುಪಡೆಯ ಮೇಲೆ ಅನಿರೀಕ್ಷಿತವಾಗಿ ಎರಗಬಲ್ಲ ಸಾಮಥ್ರ್ಯ ಹೆಲಿಕಾಪ್ಟರ್‍ಗಳಿಗಿದೆ. ಇವು ರಾಡಾರ್, ಸೋನಾರ್ ದೃಗ್ದರ್ಶಕಗಳಂತಹ ಅನೇಕ ವಿಧದ ಸೂಕ್ಷ್ಮ ಸಂವೇದಕಗಳನ್ನು, ಶೋಧಕಗಳನ್ನು ಹೇರಿಕೊಂಡು ಹಾರುತ್ತವೆ. ಭೂಸೇನೆಯ ಅವಿಭಾಜ್ಯ ಅಂಗವಾಗಿ ಟ್ಯಾಂಕ್‍ಗಳನ್ನು ಧ್ವಂಸ ಮಾಡುವುದಷ್ಟೇ ಅಲ್ಲದೆ, ಚಂದ್ರನಿಲ್ಲದ ಕತ್ತಲ ರಾತ್ರಿಯಲ್ಲೂ ತಾರೆಗಳ ಬೆಳಕಿನ ಸಹಾಯದಿಂದ ಮತ್ತು ಗಿಡಮರ-ನೆಲದ ನಡುವೆ ಕಟ್ಟಡ ಟ್ಯಾಂಕ್‍ಗಳಿಂದ ಹೊರಬೀಳುವ ಶಾಖ ತರಂಗಗಳಿಂದ ಶತ್ರುವನ್ನು ಗುರುತಿಸಿ ತಾನು ಹೊತ್ತೊಯ್ದ ಕ್ಷಿಪಣಿಗಳಿಂದ, ತಿರುಗುವ ಗನ್ನುಗಳಿಂದ ನೆಲದ ಹಾಗೂ ಆಕಾಶದ ಶತ್ರು ಪಡೆಗಳನ್ನು ಧ್ವಂಸ ಮಾಡಬಲ್ಲದು. ಸಮುದ್ರದ ಮೇಲಿನ ಹಡಗುಗಳನ್ನು ಗುರುತಿಸಿ ನಾಶ ಮಾಡುವಂತೆ, ಸಾಗರದಾಳದ ಜಲಾಂತರ್ಗಾಮಿಗಳನ್ನು ಕಂಡುಹಿಡಿದು ತನ್ನ ಟಾರ್ಪಿಡೋಗಳನ್ನು ಗುರಿಯಿಡಬಲ್ಲದು. ಭೂಸೇನೆ, ವಾಯುಸೇನೆ, ನೌಕಾಪಡೆಗಳಲ್ಲಿ ವಿಧವಿಧದ ಪಾತ್ರಗಳನ್ನು ವಹಿಸುತ್ತಿರುವ ಧ್ರುವ ಸೇನೆಯ ಸಕ್ರಿಯ ಅಂಗವಾಗಿದೆ.

	ಧ್ರುವ ಹೆಲಿಕಾಪ್ಟರ್‍ನ ಬಳಕೆ ಯುದ್ಧರಂಗಕ್ಕೆ ಸೀಮಿತವಾಗಿ ಉಳಿಯದೆ, ಶಾಂತಿ ಸಮಯದಲ್ಲೂ ಜನಸಾಮಾನ್ಯರ ನೆರವಿಗೆ ಇದು ಧಾವಿಸುತ್ತದೆ. ತುರ್ತಾಗಿ ನದಿಗಳನ್ನು ದಾಟಲು, ವಾಹನ ತುಂಬಿದ ರಸ್ತೆಗಳ ಬಿಟ್ಟು ಹಾಯಲು, ಬೆಟ್ಟ ಗುಡ್ಡಗಳ ಮೇಲೆ ಹಾರಲು, ಹೆಲಿಕಾಪ್ಟರ್ ಅತ್ಯುಪಯುಕ್ತ. ಇದು ಮಂತ್ರಿ ಮಹೋದಯರನ್ನು ಕೊಂಡೊಯ್ಯಬಲ್ಲ ಶ್ರೀಮಂತ ವಾಹನವೂ ಆಗಿದೆ. ಇಂದು ಶಾಂತಿ ಸಮಯದ ಬಳಕೆಗಾಗಿ ಧ್ರುವ ಹೆಲಿಕಾಪ್ಟರ್‍ಗೆ ದೊಡ್ಡ ಮಾರುಕಟ್ಟೆಯೇ ತೆರೆದಿದೆ.

	ಡ್ರಾಯಿಂಗ್ ಬೋರ್ಡಿನ ಗೀಟು ಗೆರೆಗಳಿಂದ ಅಸ್ತಿತ್ವಕ್ಕೆ ಬಂದು, ಸುಂದರ ರೂಪ ತಳೆದದ್ದು ಧ್ರುವ ಹೆಲಿಕಾಪ್ಟರ್.  ನೆಲದಿಂದ ಕೆಲವೇ ಅಡಿ ಹಾರಿದಂದಿನಿಂದ ಆರಂಭಗೊಂಡು ಕೊನೆಗೆ ಜಗತ್ತಿನ ಅತೀ ಎತ್ತರದ ಹೆಲಿಪ್ಯಾಡ್‍ನಲ್ಲಿ ಇಳಿಯುವವರೆಗಿನ ಧ್ರುವದ ಹಾದಿ ರೋಮಾಂಚನಕಾರಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಧ್ರುವ ಜಗತ್ತಿನ ತನ್ನ ವರ್ಗದ ಹೆಲಿಕಾಪ್ಟರ್‍ಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲದು. ಯುದ್ಧ ಮತ್ತು ಶಾಂತಿಯ ಎರಡೂ ಸಮಯದಲ್ಲೂ ನೆರವಿಗೆ ಧಾವಿಸಬಲ್ಲದು.										(ನೇಮಿಚಂದ್ರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ